ಮಾಂಟೆವಿಡೀಯೊ
ದಕ್ಷಿಣ ಅಮೆರಿಕದ ಉರುಗ್ವೆ ದೇಶದ ಒಂದು ವಿಭಾಗ, ಬಂದರು ನಗರ, ದೇಶದ ರಾಜಧಾನಿ.  ಉರುಗ್ವೆಯ ದಕ್ಷಿಣ ತೀರದ ಅಟ್ಲಾಂಟಿಕ್ ಸಾಗರದ ಈ ನಗರ ದೇಶದ ಹಾಗೂ ವಿಭಾಗದ ಆಡಳಿತ ಕೇಂದ್ರ. ವಿಸ್ತೀರ್ಣ 664 ಚಕಿಮೀ. ಜನಸಂಖ್ಯೆ 13,62,000(1980). ನಗರದ ಕೇಂದ್ರ ಭಾಗದಲ್ಲಿ ಪ್ಲಾಜಾ ಉದ್ಯಾನವನವಿದೆ.  ಸುತ್ತಲೂ ಇರುವ ಸುಂದರ ಬೃಹತ್ ಕಟ್ಟಡಗಳಲ್ಲಿ ಸರ್ಕಾರಿ ಕಚೇರಿಗಳು, ವಸ್ತುಸಂಗ್ರಹಾಲಯಗಳು.  ಕಲಾಪ್ರದರ್ಶನ ಮಂದಿರಗಳು, ವಿಕ್ಟೋರಿಯಾ ಪ್ಲಾಜಾ ಹೋಟೆಲ್ ಮುಂತಾದವೂ ಹಿಂದಿನ ಅರಮನೆಗಳೂ ಇವೆ.  ಪ್ರಾಚೀನ ಭಾಗವನ್ನು ಒಳಗೊಂಡ ಹಳೆಯ ನಗರದಲ್ಲಿ ಸುಮಾರು 1700 ಮತ್ತು 1800ರ ಕಾಲದಲ್ಲಿ ಕಟ್ಟಿಡಗಳಿವೆ. ಹಳೆಯ ನಗರದ ದಕ್ಷಿಣ ಮತ್ತು ಪೂರ್ವ ಭಾಗಕ್ಕೆ ಬೆಳೆದಿರುವ ಹೊಸನಗರದ ತೀರದುದ್ದಕ್ಕೂ ಮರಳಿನ ಸುಂದರ ತೀರಗಳು ಕಂಡುಬರುತ್ತದೆ.  ವಿಶ್ವವಿದ್ಯಾಲಯಗಳಿವೆ.  ಉರುಗ್ವೆ ಸರ್ಕಾರದ ಶೇಕಡಾ 60 ಭಾಗದಷ್ಟು ನೌಕರರು ಈ ನಗರದಲ್ಲಿ ವಾಸಿಸುತ್ತಿದ್ದಾರೆ.  ಇಲ್ಲಿಂದ ಉಣ್ಣೆ, ಮಾಂಸ, ಧರ್ಮ ಮತ್ತು ಕೃಷಿ ಉತ್ಪನ್ನಗಳನ್ನು ಹೊರದೇಶಕ್ಕೆ ಕಳುಹಿಸುತ್ತಾರೆ.  ಮಾಂಸಸಂಸ್ಕರಣೆ ಮತ್ತು ಡಬ್ಬಗಳಲ್ಲಿ ತುಂಬುವುದು, ಗಿರಣಿಗಳು, ಎಣ್ಣೆ ಶುದ್ಧೀಕರಣ, ಪ್ರವಾಸೋದ್ಯಮ ಮುಂತಾದವು ನಗರದಲ್ಲಿರುವ ಮುಖ್ಯ ಆರ್ಥಿಕ ಚಟುವಟಿಕೆಗಳಾಗಿವೆ.  ಸ್ಪಾನಿಷ್ ಜನರು 1700ರಲ್ಲಿ ಈ ನಗರವನ್ನು ಸ್ಥಾಪಿಸಿದರು.  ಅಂದಿನಿಂದ ಇಂದಿನ ತನಕ ಸುತ್ತಮುತ್ತಲಿನ ದೇಶಗಳ ಸರಕು ಸಾಮಾನುಗಳ ಮಾರಾಟ ಕೇಂದ್ರವಾಗಿ ಬೆಳೆದು 1800ರ ಕೊನೆಯ ಭಾಗದಲ್ಲಿ ಕೊನೆಯ ಭಾಗದಲ್ಲಿ ಫ್ರಾನ್ಸ್, ಜರ್ಮನಿ ಬ್ರಿಟನ್, ಇಟಲಿ, ಹಂಗೇರಿ ಮುಂತಾದ ಯೂರೋಪಿಯನ್ ರಾಷ್ಟ್ರಗಳಿಂದ ಬಂದ ವಲಸೆಗಾರರು ಈ ನಗರದ ಅಭಿವೃದ್ಧಿಗೆ ಕಾರಣರಾದರು.  ಹೀಗೆ ಬಂದ ವಲಸೆಗಾರರು ಕುಶಲಕಾರ್ಮಿಕರಾಗಿದ್ದು ಈ ನಗರದ ಕೈಗಾರಿಕೆ ಮತ್ತು ವಾಣಿಜ್ಯ ವ್ಯಾಪಾರ ಬೆಳೆಯಲು ಕಾರಣರಾದರು.	
	(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ